

ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ (KHSDRP) ಅಡಿಯಲ್ಲಿ ಸಭಾಂಗಣ (ಮೀಟಿಂಗ್ ಹಾಲ್) ಮತ್ತು ಬೋರ್‌ವೆಲ್ ಸೇರಿದಂತೆ ಒಟ್ಟು ಸುಮಾರು 40 ಲಕ್ಷ ರೂ ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನೆಡೆಯುತ್ತಿಲ್ಲ ಎಂದು ಗ್ರಾಮಸ್ಥರು ಹಾಗೂ ಕರವೇ ಸಂಘಟನೆ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.ಆಸ್ಪತ್ರೆಯ ಸುತ್ತಲಿನ ಕಾಂಪೌಂಡ್ ಗೋಡೆ, ಸಿಮೆಂಟ್ ನೆಲಹಾಸು, ವಾಹನ ಹಾಗೂ ಆಂಬುಲೆನ್ಸ್ ನಿಲುಗಡೆ ಶೆಡ್, ಕಬ್ಬಿಣದ ಕಂಬಗಳು, ಮೇಲ್ಛಾವಣಿ, ಗೇಟ್, ಕಿಟಕಿಗಳು, ಮೀಟಿಂಗ್ ಹಾಲ್, ವಿದ್ಯುತ್ ವೈರಿಂಗ್ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳಲ್ಲೂ ಗುಣಮಟ್ಟದ ಕೊರತೆ ಕಂಡುಬಂದಿದೆ ಎಂದು ದೂರಲಾಗಿದೆ.ಈ ಹಿನ್ನೆಲೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಿ. ಕೃಷ್ಣೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ಮಾಡುವ ವೇಳೆ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಚರ್ಚಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗ್ರಾಮಸ್ಥರ ಆರೋಪದಂತೆ, ಈಗಾಗಲೇ ಸುಮಾರು ₹14 ಲಕ್ಷಕ್ಕೂ ಅಧಿಕ ಹಣ ಬಿಡುಗಡೆ ಆಗಿದ್ದರೂ ಅದರ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಹೊಸ ನಿರ್ಮಾಣ ಹಂತದಲ್ಲಿ ಹೊಸ ಕಬ್ಬಿಣ ಬಳಸದೆ ಹಳೆಯ ಕಬ್ಬಿಣದ ಕಂಬಗಳಿಗೆ ಕೇವಲ ಬಣ್ಣ ಬಳಿದು ಮರುಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಪೇಂಟಿಂಗ್ ಕೂಡ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿರುವುದಲ್ಲದೆ ಆಸ್ಪತ್ರೆಯ ಹೆರಿಗೆ ವಾರ್ಡ್ ಸೇರಿದಂತೆ ಹಲವು ಕೊಠಡಿಗಳ ಮೇಲ್ಛಾವಣಿಯಿಂದ ಈಗಾಗಲೇ ಮಳೆ ನೀರು ಸೋರಿಕೆಯಾಗುತ್ತಿದ್ದು, ಒಳಭಾಗದಲ್ಲಿ ನೀರು ನಿಂತು ರೋಗಿಗಳು ಹಾಗೂ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸುತ್ತಿರುವ ಪರಿಸ್ಥಿತಿ ಎದುರಾಗಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮೀಟಿಂಗ್ ಹಾಲ್‌ನಲ್ಲಿ ಅಳವಡಿಸಿರುವ ಕಿಟಕಿಗಳ ಗಾಜು,ಆಸ್ಪತ್ರೆಯಲ್ಲಿ ಸಂಪೂರ್ಣ ಹೊಸ ವಿದ್ಯುತ್ ವೈರಿಂಗ್ ಮಾಡಬೇಕಿದ್ದರೂ ಹಳೆಯ ವ್ಯವಸ್ಥೆಯನ್ನೇ ಉಳಿಸಿಕೊಂಡು ಅಲ್ಲಲ್ಲಿ ಸ್ವಿಚ್‌ಗಳು ಇರುವ ಜಾಗಕ್ಕೆ ಹೊಸ ಸ್ವಿಚ್ ಅಳವಡಿಸುವ ಕೆಲಸ ಮಾತ್ರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನೂ ಅಗತ್ಯ ಸ್ಥಳಗಳಲ್ಲಿ ಅಳವಡಿಸಿರುವುದಿಲ್ಲ ಹಾಗೂ ಆಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಬ್ಲಾಕ್‌ಗಳನ್ನು ಸಮರ್ಪಕವಾಗಿ ಅಳವಡಿಸದ ಕಾರಣ ಹಲವು ಕಡೆ ಅಸಮತೋಲನ ಕಂಡುಬರುತ್ತಿದೆ, ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟು ಮಳೆ ನೀರು ನಿಲ್ಲು ವಂತಾಗಿದೆ. ಮಳೆಗಾಲದಲ್ಲೇ ಬೋರ್‌ವೆಲ್ ಕೊರೆಯಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲಿ ಜುಲೈ–ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚಿರುವುದರಿಂದ ಈ ಅವಧಿಯಲ್ಲಿ ಅಲ್ಪ ಆಳದಲ್ಲಿಯೇ ನೀರು ದೊರೆಯುವ ಸಾಧ್ಯತೆ ಇರುತ್ತದೆ. ಆದರೆ ಬೇಸಿಗೆಯಲ್ಲಿ ಇದೇ ಬೋರ್‌ವೆಲ್ ಬತ್ತಿಹೋಗುವ ಅಪಾಯವಿದ್ದು, ಇಂತಹ ಸಮಯದಲ್ಲಿ ಬೋರ್‌ವೆಲ್ ಕೊರೆಯುವುದು ವೈಜ್ಞಾನಿಕವಾಗಿ ಸೂಕ್ತವಲ್ಲ ವಾದರೂ. ಬೋರ್‌ವೆಲ್ ಕಾಮಗಾರಿ ಕೈಗೊಳ್ಳಲಾಗಿದೆ ಇದಲ್ಲದೆ, ಮೀಟಿಂಗ್ ಹಾಲ್ ಹಾಗೂ ಬೋರ್‌ವೆಲ್ ಕಾಮಗಾರಿಗೆ ಸಂಬಂಧಿಸಿದಂತೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿರುತ್ತಾರೆ. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ವಸಂತ್ ಬೊಮ್ಮನಕೆರೆ (ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ):”ಸರ್ಕಾರದ ಹಣ ಜನರ ತೆರಿಗೆಯ ಹಣ. ಸುಮಾರು ₹40 ಲಕ್ಷ ವೆಚ್ಚದ ಕಾಮಗಾರಿ ಇಷ್ಟೊಂದು ಕಳಪೆಯಾಗಿರುವುದು ಅತ್ಯಂತ ಬೇಸರದ ಸಂಗತಿ. ಕಾಮಗಾರಿ ಪೂರ್ಣಗೊಳಿಸುವ ಮೊದಲು ಉನ್ನತ ಮಟ್ಟದ ತಾಂತ್ರಿಕ ತನಿಖೆ ನಡೆಸಿ, ಕಳಪೆ ದೃಢಪಟ್ಟರೆ ಒಂದು ರೂಪಾಯಿಯೂ ಬಿಲ್ ಬಿಡುಗಡೆ ಮಾಡಬಾರದು. ಇಂತಹ ಭ್ರಷ್ಟ ಗುತ್ತಿಗೆದಾರರಿಗೆ ಸರ್ಕಾರ ಶಾಶ್ವತವಾಗಿ ಕಡಿವಾಣ ಹಾಕಬೇಕು. ಎಂದು ದೂರಿರು ತಾರೆ. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಕೆ.ಪಿ. ಕೃಷ್ಣೇಗೌಡ ಮಾತನಾಡಿ ಆಸ್ಪತ್ರೆ ಎಂದರೆ ಜನರ ಜೀವ ಉಳಿಸುವ ಸ್ಥಳ. ಇಲ್ಲಿ ಕಳಪೆ ಕಾಮಗಾರಿಗೆ ಅವಕಾಶವೇ ಇರಬಾರದು. ಪ್ರತಿಯೊಂದು ಕಾಮಗಾರಿಯನ್ನೂ ಮರುಪರಿಶೀಲಿಸಿ, ಗುಣಮಟ್ಟಕ್ಕೆ ಅನುಗುಣವಾಗಿ ಮರುನಿರ್ಮಾಣ ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರದ ಗಮನಕ್ಕೆ ತಂದು ಕಟ್ಟುನಿಟ್ಟಿನ ಕ್ರಮ ಸಂಬಂಧ ಪಟ್ಟ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು.”ವಿ. ಪಿ ವಿಶ್ವನಾಥ್, ಅಧ್ಯಕ್ಷರು,ವಳಲಹಳ್ಳಿ ಬೆಳೆಗಾರರ ಸಂಘ”ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದೆ. ಆದರೆ ಜನರಿಗೆ ಉತ್ತಮ ಸೌಲಭ್ಯ ಸಿಗಬೇಕಾದ ಜಾಗದಲ್ಲಿ ಕಳಪೆ ಕಾಮಗಾರಿ ನಡೆದಿರುವುದು ನೋವಿನ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿ, ಭ್ರಷ್ಟಾಚಾರಕ್ಕೆ ಅವಕಾಶ ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
