
ಹಾಸನ:- ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಶೆಟ್ಟಿಹಳ್ಳಿ ಚರ್ಚ್ ಸಮೀಪ ಈಜಲು ತೆರಳಿದ ಮೂವರು ಯುವಕರು ನೀರು ಪಾಲಾಗಿದ್ದಾರೆ.
ಇವರು ಬೆಂಗಳೂರು ಮೂಲದ ಚರಂಗ್ (20) ಮಿಲನ್ (23) ಮಣಿಕಂಠ (20) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದು, ವಾಪಸ್ ಬರುವಾಗ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಚರ್ಚ್ ಸಮೀಪ ಈಜಲು ನದಿಗೆ ಇಳಿದಿದ್ದು, ಆಕಸ್ಮಿಕವಾಗಿ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೋಲೀಸ್ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿ , ಮೂವರ ಮೃತ ದೇಹಗಳನ್ನು ಹೊರತೆಗೆದು , ಮುಂದಿನ ಕ್ರಮ ಕೈಗೊಳ್ಳಲಾಯಿತು. ಯುವಕರ ಅಕಾಲಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅವರ ಮನೆಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
