
ಬೇಲೂರು – ಆಶ್ರಯ ಯೋಜನೆಯಡಿ ಪುರಸಭೆಯಿಂದ ನೀಡಲಾದ ನಿವೇಶನವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ನಿವೇಶನದಲ್ಲೆ ಇರುವ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಒತ್ತಾಯಿಸಿ ನಿವೇಶನ ಮಾಲೀಕರು ಹಾಗೂ ಕುಟುಂಬಸ್ಥರು ಕೆ. ಆರ್ ಎಸ್ ಪಕ್ಷದ ನೇತೃತ್ವದಲ್ಲಿ ಪುರಸಭೆ ಎದುರು ಧರಣಿ ನಡೆಸಿದರು.ನಿವೇಶನದ ಮಾಲಕಿ ಪದ್ಮಾ ಅವರ ಪುತ್ರಿ ಮಧು ಮಾತನಾಡಿ ನಮ್ಮ ತಾಯಿಗೆ ಪುರಸಭೆಯಿಂದ 20*20 ಅಳತೆಯ ನಿವೇಶನ ನೀಡಲಾಗಿದ್ದು, ನಾವು ಮನೆ ನಿರ್ಮಾಣಕ್ಕಾಗಿ ಫೌಂಡೇಶನ್ ಹಾಕಿದ್ದೇವೆ. ಆದರೆ ಪಕ್ಕದ ಮನೆಯವರು ನಮ್ಮ ಜಾಗದಲ್ಲಿ ನೀರಿನ ಟ್ಯಾಂಕ್ ಇಟ್ಟು ಮನೆ ಕಟ್ಟಲು ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಹಲವು ಬಾರಿ ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ನಮ್ಮ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಸ್ಟೇರ್ ಕೇಸ್ ಮಾಡಿಕೊಂಡಿದ್ದಾರೆ. ಈ ಕುರಿತು ಪುರಸಭೆಗೆ ಒಂದು ವರ್ಷದ ಹಿಂದೆಯೇ ಮನವಿ ಸಲ್ಲಿಸಿದ್ದರೂ , ಸಮಸ್ಯೆ ಬಗೆ ಹರಿಸಿಲ್ಲ ಎಂದು ದೂರಿದರು.ಇತ್ತೀಚೆಗೆ ಪೋಲಿಸರು ಬಂದು ನಮ್ಮಿಂದ ಖಾಲಿ ಕಾಗದದ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆ ಆರ್ ಎಸ್ ಪಕ್ಷದ ಅಧ್ಯಕ್ಷ ಆದೇಶ್ ಮಾತನಾಡಿ ಪುರಸಭೆಯ ನಿರ್ಲಕ್ಷ್ಯದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಬಂದಿದೆ. ಒಂದು ವರ್ಷದ ಹಿಂದೆಯೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ಧರಣಿ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಮಾತನಾಡಿ ಸೋಮವಾರವೇ ಸಂಬಂಧ ಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದೇವು. ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಆದರೆ ಕ್ರಮ ವಿಳಂಬವಾದ ಕಾರಣ ಇಂದು ಧರಣಿ ನಡೆಸಿದ್ದಾರೆ. ಸಂಜೆಯೊಳಗೆ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಮತ್ತೊಬ್ಬರ ನಿವೇಶನದಲ್ಲಿ ನೀರಿನ ಟ್ಯಾಂಕ್ ಇಡುವುದು ತಪ್ಪು . ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಧರಣಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ , ಸದಸ್ಯರಾದ ಆಸೀಪ್, ಉಷಾ ಹಾಗೂ ಹಲವರು ಭಾಗವಹಿಸಿದ್ದರು.
