

ಸಕಲೇಶಪುರ: ಪ್ರಕೃತಿ ಇರುವೆಡೆ ಸೌಂದರ್ಯ ಇರುತ್ತದೆ. ನಮ್ಮ ಊರಿನ ಸೌಂದರ್ಯ ಹೆಚ್ಚಿಸಬೇಕಾದರೆ ಹಸಿರು ಹೆಚ್ಚಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಮಳಲಿ ಗ್ರಾಮದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕಲೇಶಪುರದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದಡಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸುವಂತೆ ಕರೆ ನೀಡಿದರು. ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 52 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಮಾತನಾಡಿ, ಪರಿಸರ ನಾಶ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮ್ಲಜನಕದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಸುಪ್ರೀತಾ, ಪ್ರಕೃತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗಿಡ ನೆಡುವಿಕೆ ಹಾಗೂ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ನಡೆಯಿತು. ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಇಒ ಗಂಗಾಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:- ನಾಗೇಶ್. ಎಚ್.ಎಮ್. ಮಾಗೇರಿ
