
ಸಕಲೇಶಪುರ: ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡದಿದ್ದರೆ ಅಂತಹ ಹೋಟೆಲ್, ಬೇಕರಿ, ಹಾಗೂ ರೆಸಾರ್ಟ್ ಹೋಂಸ್ಟೇಗಳ ಮಾಲಿಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಕಿಶೋರ್ ಹೇಳಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಹೋಟೆಲ್ ಗಳು, ಬೀದಿ ಬದಿ ವ್ಯಾಪಾರಿಗಳು, ಕ್ಯಾಂಟೀನಗಳು, ಬೇಕರಿಗಳು, ಹೋಂಸ್ಟೇ ಹಾಗೂ ರೆಸಾರ್ಟ್ ಗಳಲ್ಲಿ ಕಳಪೆ ಗುಣಮಟ್ಟ ವಸ್ತುಗಳನ್ನು ಬಳಸಿ ಆಹಾರ ಪಧಾರ್ಥಗಳನ್ನು ತಯಾರಿಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೆ ಪಟ್ಟಣದ ಬೇಕರಿಯೊಂದರ ಮೇಲೆ ದಾಳಿ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಮೊದಲಿಗೆ ಆಹಾರ ಪಧಾರ್ಥಗಳನ್ನು ಮಾರಾಟ ಮಾಡುವವರು ಎಫ್.ಎಸ್.ಎಸ್.ಎ.ಐ ಲೈಸೆನ್ಸ್ ಹೊಂದಿರಬೇಕು ಇಲ್ಲದಿದ್ದರೆ ಅಂತಹ ಮಾರಾಟಗಾರರ ಮೇಲೆ ದಾಳಿ ನಡೆಸಲಾಗುವುದು. ಲೈಸೆನ್ಸ್ ಹೊಂದದವರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಲು ಮುಂದಾಗಬೇಕು. ಪ್ರತಿಯೊಬ್ಬರು ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ನೀಡಬೇಕು. ಕಳಪೆ ಗುಣಮಟ್ಟದ ಆಹಾರವನ್ನು ನೀಡಬಾರದು. ಗೋಬಿ ಮಂಚೂತಿ, ಕಬಾಬ್ ಮುಂತಾದ ಆಹಾರಗಳಲ್ಲಿ ಯಾವುದೆ ರೀತಿಯ ಕೆಮಿಕಲ್ ಕಲರ್ ಗಳನ್ನು ಬಳಸಬಾರದು. ನಿಯಮ ಮೀರಿ ಕೆಮಿಕಲ್ ಕಲರ್ ಗಳನ್ನು ಹಾಕಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ನಿಷೇದ ಮಾಡಿರುವ ಕುಡಿಯುವ ನೀರಿನ ಕಂಪನಿಯ ಬಾಟಲ್ ಗಳು, ಮತ್ತಿತರ ವಸ್ತುಗಳನ್ನು ಬಳಸಿದರೂ ಸಹ ಕ್ರಮ ಕೈಗೊಳ್ಳಲಾಗುತ್ತದೆ. ತಿಂಡಿ ತಿನುಸುಗಳಿಗೆ ಕೃತಕ ಬಣ್ಣಗಳನ್ನು ಯಾರು ಸಹ ಬಳಸಬಾರದು, ಕರಿದ ವಸ್ತುಗಳನ್ನು ಮಾಡಲು ಒಮ್ಮೆ ಮಾತ್ರ ಎಣ್ಣೆ ಬಳಸಬೇಕು, ಮತ್ತೆ ಮತ್ತೆ ಒಂದೆ ಎಣ್ಣೆಯನ್ನು ಬಳಸಬಾರದು. ಒಟ್ಟಾರೆಯಾಗಿ ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ನೀಡಬೇಕು. , ನಿಯಮಗಳನ್ನು ಮೀರಿ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
